ಬ್ಯಾರೋ -
	ಒಂದು ಅಥವಾ ಹೆಚ್ಚಿನ ಗೋರಿಗಳ ಮೇಲೆ ನಿರ್ಮಿಸಿರುವ ವೃತ್ತಾಕಾರದ ಅಥವಾ ಲಂಬಾಕಾರದ ಮಣ್ಣಿನ ದಿಬ್ಬ. ಭೂಮಿಯೊಳಗೆ ಅಗೆದ ಗುಂಡಿಯಲ್ಲಿ ಶವವನ್ನು ಹಗಿದ ಮೇಲೆ ಆ ಸ್ಥಳದಲ್ಲಿ ಗೋರಿಯನ್ನು ಗುರುತಿಸಲು ಪ್ರಾಚೀನ ಕಾಲದಲ್ಲಿ ಬ್ಯಾರೋಗಳನ್ನು ನಿರ್ಮಿಸುತ್ತಿದ್ದರು, ಸಾಮಾನ್ಯವಾಗಿ ಇವುಗಳ ಸುತ್ತ ಕಾಲುವೆ ಅಗೆಯುತ್ತಿದ್ದರು, ಸುಟ್ಟ ಮಣ್ಣಿನ ಶವತೊಟ್ಟೆಯಲ್ಲಿ, ಕಲ್ಲಿನ ಶವಸಂಪುಟದಲ್ಲಿ ಅಥವಾ ಕೋಣೆಗೋರಿಯಲ್ಲಿ ಶವವನ್ನು ಇಡಲಾಗುತ್ತಿತ್ತು. ಬ್ರಿಟನ್ನಿನಲ್ಲಿ ಇಂಥ ಸಮಾಧಿಗಳು ಹೆಚ್ಚಾಗಿ ಕಂಡುಬರುತ್ತವೆ. ಆ ದೇಶದ ನವಶಿಲಾಯುಗ ಕಾಲದಲ್ಲಿ ಲಂಬಾಕಾರದ ಬ್ಯಾರೋಗಳು ಬಳಕೆಯಲ್ಲಿದ್ದುವು. ಶ್ರೀಮಂತವರ್ಗದ ಕುಟುಂಬದಲ್ಲಿ ಸತ್ತ ಹಲವರನ್ನು ಒಂದು ಗೋರಿಯಲ್ಲೇ ಸಾಮಾನ್ಯವಾಗಿ ಹಗಿಯಲಾಗುತ್ತಿತ್ತು. ಅನಂತರ ಬಂದ ಕಂಚಿನ ಯುಗದಲ್ಲಿ ವೃತ್ತಾಕಾರದ ಬ್ಯಾರೋಗಳು ಬಳಕೆಗೆ ಬಂದುವು. ವೃತ್ತಾಕಾರದ ಬ್ಯಾರೋಗಳಲ್ಲಿ ಸಾಮಾನ್ಯವಾಗಿ ಒಂದೊಂದೇ ಶವವನ್ನು ಹುಗಿಯಲಾಗುತ್ತಿತ್ತು. ರೋಮನ್ ಆಂಗ್ಲೊ-ಸ್ಯಾಕ್ಸನ್ ಮತ್ತು ವೈಕಿಂಗ್ ಕಾಲಗಳಲ್ಲೂ ವಿರಳವಾಗಿ ವೃತ್ತಾಕಾರದ ಬ್ಯಾರೋಗಳನ್ನು ಬಳಸಲಾಗುತ್ತಿತ್ತು. ವೆಸೆಕ್ಸ್ ಸಂಸ್ಕøತಿಯ ಕಾಲದಲ್ಲಿ ಹಲವು ಬಗೆಯ ಬ್ಯಾರೋಗಳು ರೂಢಿಯಲ್ಲಿದ್ದುವು. ಕಂಚಿನಯುಗದ ಉದ್ದಕ್ಕೂ ಅನೇಕ ಪ್ರದೇಶಗಳಲ್ಲಿ ಇವನ್ನು ನಿರ್ಮಿಸುವ ಪದ್ಧತಿಯಿತ್ತು. ದಕ್ಷಿಣ ಭಾರತದ ಬೃಹತ್ ಶಿಲಾಸಮಾಧಿ ಪದ್ಧತಿಯಲ್ಲೂ ಬ್ಯಾರೋಗಳು ಕಂಡುಬರುತ್ತವೆ.
(ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ